ಈ ಗಾಯದ ಕಲೆ ನನ್ನನ್ನೆಲ್ಲೋ ಒಯ್ಯುತ್ತಿದೆ
ಇದು ಬಿದ್ದ ಗಾಯವಲ್ಲ
ಕಾದಾಡಿ ಗೆದ್ದ ಗಾಯ
ಯುದ್ಧದಲ್ಲೇ ಆಗಬೇಕಂತೇನೂ ಇಲ್ಲ
ಗಲ್ಲಿಯ ಗದ್ದಲದಲ್ಲೂ ಆಗಬಹುದು
ನಂಬಿದ ನಿಜಕ್ಕಾಗಿ ಗುದ್ದಾಡಿದಾಗ
ಆದ ಗಾಯದ ಬಗ್ಗೆ ಹೆಮ್ಮೆ ಎನಿಸುತ್ತದೆ
ಅದರ ಮೇಲೆ ಕೈಯಾಡಿಸಿದಾಗ
ಆತ್ಮೀಯವೆನಿಸುತ್ತದೆ
ಮುಲಾಮು ಸವರುತ್ತ
ಕಣ್ಣೀರು ಹಾಕಿದ ಅಮ್ಮ ಕಾಣುತ್ತಾಳೆ
ಅದರ ಬಗ್ಗೆ ತಿಳಿದು
ಸವರಿ ಮುತ್ತು ಕೊಟ್ಟ
ಹೆಂಡತಿ ನೆನಪಾಗುತ್ತಾಳೆ
ನನ್ನಪ್ಪ ಹೀರೋ ಗೊತ್ತಾ
ಅಂತ ಕಣ್ಣಲ್ಲಿ ಮಿಂಚು ತರುವ
ಪುಟ್ಟಿ ಕಣ್ಣ ಮುಂದೆ ನಿಲ್ಲುತ್ತಾಳೆ
ಸಮವಸ್ತ್ರಕ್ಕೆ ತೂಗುವ ಪದಕಗಳೇ
ಸಾಹಸದ ಕುರುಹುಗಳಲ್ಲ
ಗಾಯಗಳು ತುಂಬುವ ಹುರುಪು
ಯಾವ ಪದಕಕ್ಕೂ ಕಮ್ಮಿ ಅಲ್ಲ
ಈಗ ಈ ಚಳಿಗೆ ನಡುಗುತ್ತಾ
ವೈರಿ ಮಾಡಬಹುದಾದ
ಇನ್ನಷ್ಟು ಗಾಯಗಳ ಬಗ್ಗೆ ಊಹಿಸುತ್ತ
ಎಲ್ಲೆಗಳ ಎಲ್ಲೆಗಳು
ಎಲ್ಲಿಯವರೆಗೋ
ತಿಳಿಯದ ಈ ಸಮರಕ್ಕೆ
ಸಾಕ್ಷಿಯಾಗಿ
ಕಾಲ ಕಳೆಯುತ್ತಿದ್ದೇನೆ